ನರಸಿ ಮೆಹತಾ
	1415-1481. ವೈಷ್ಣವ ಕವಿ. ಸಂತ. ಹುಟ್ಟಿದ್ದು ಸೌರಾಷ್ಟ್ರದ ಜುನಾಗಡದ ಸಮೀಪದ ತಲಾಜಾ ಗ್ರಾಮದಲ್ಲಿ. ಬ್ರಾಹ್ಮಣ ವಂಶಸ್ಥನಾದ ಈತನ ತಂದೆ ಕೃಷ್ಣದಾಸ; ತಾಯಿ ದಯಾಕುಂವರ. ಬಾಲ್ಯದಲ್ಲಿಯೇ ಅನಾಥನಾದ ಈತ ಕಷ್ಟದಿಂದ ಕರುಣಾಜನಕ ಜೀವನಯಾತನೆ ನಡೆಸಿದ. 17ನೆಯ ವಯಸ್ಸಿನಲ್ಲಿಯೇ ಸಂಸಾರಿಯಾದ ಈತ ನಿರುದ್ಯೋಗಿಯಾಗಿದ್ದುದರಿಂದ ಅತ್ತಿಗೆಯ ಕಟೂಕ್ತಿಗಳಿಗೊಳಗಾಗಿ ಮನೆ ಬಿಟ್ಟ. ಅನಂತರ ಅನುಭಾವ ಜೀವನ ನಡೆಸಿ ಅಲೌಕಿಕ ಸುಖ ಪಡೆದ. 

	ಈತನ ಕಾಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಈವರೆಗೆ ಈತನ ಕಾಲ 1415ರಿಂದ 1481ರವರೆಗೆ ಎಂದು ಭಾವಿಸಲ್ಪಟ್ಟಿತ್ತು. ಆದರೆ ಇತ್ತೀಚಿನ ಸಂಶೋಧನೆಯಿಂದ ಈತ 1500ರಿಂದೀಚಿನವನೆಂದು ಸಿದ್ಧಾಂತವಾಗಿದೆ. ಈತ 15ನೆಯ ಶತಮಾನದ ಉತ್ತರಾರ್ಧದಲ್ಲಿದ್ದು ಗುಜರಾತಿಯಲ್ಲಿ ರಾಧಾಕೃಷ್ಣ ಗೀತೆಗಳನ್ನು ರಚಿಸಿದ್ದಾನೆ ಎನ್ನಲಾಗಿದೆ. 17ನೆಯ ಶತಮಾನದ ವೇಳೆಗೆ ಈತನ ಕೀರ್ತಿ ದೇಶದಲ್ಲೆಲ್ಲ ಹರಡಿತ್ತು.

	ಈತ ಗುಜರಾತಿ ಭಕ್ತಿಸಾಹಿತ್ಯದ ಶ್ರೇಷ್ಠಮತ ಕವಿಗಳಲ್ಲೊಬ್ಬ. ಈತನ ಹಾಗೂ ಮೀರಾಬಾಯಿಯವರ ವ್ಯಕ್ತಿತ್ವಗಳಿಗನುರೂಪವಾಗಿ ನರಸಿಂಹ ಮೀರಾಯುಗ ಎಂಬ ಒಂದು ಸ್ವತಂತ್ರ ಸಾಹಿತ್ಯ ಕಾಲವನ್ನು ಗುಜರಾತಿ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ವಿಷಯ ಹಾಗೂ ವಸ್ತುಗಳ ದೃಷ್ಟಿಯಿಂದ ಈತನ ಸಮಸ್ತ ಕೃತಿಗಳನ್ನು ಎರಡು ವರ್ಗಗಳಲ್ಲಿ ವಿಭಜಿಸಲಾಗಿದೆ. ಪ್ರಥಮ ವರ್ಗದಲ್ಲಿ ಶಾಮಲದಾಸನೋ ವಿವಾಹ ಮತ್ತು ಹಾರಮಾಲಾ ಎಂಬ ಎರಡು ಕೃತಿಗಳು ಸೇರುತ್ತವೆ. ಇವುಗಳಲ್ಲಿ ಕವಿ ತನ್ನ ಜೀವದ ಅಲೌಕಿಕ ಘಟನೆಗಳನ್ನು ವರ್ಣಿಸಿದ್ದಾನೆ. ದ್ವಿತೀಯ ವರ್ಗದಲ್ಲಿ ಒಂಬತ್ತು ಕೃತಿಗಳನ್ನು ಸಂಗ್ರಹಿಸಲಾಗಿದೆ:  1. ಸೂರತ ಸಂಗ್ರಾಮ,  2. ಗೋವಿಂದಾಗಮನ  3. ಚಾತುರಿ ಛಬ್ಬೀಸೀ,  4. ಚಾತುರಿ ಶೋಡಸೀ,  5. ದಾಣಲೀಲಾ, 6. ಸುದಾಮಚಾರಿತ,  7. ರಾಸ ಸಹಸ್ರಪದಿ, 8. ಶೃಂಗಾರಮಾಲಾ, 9. ಬಾಲಲೀಲಾ. ಈ ಎಲ್ಲ ಕೃತಿಗಳಿಗೆ ಶ್ರೀ ಕೃಷ್ಣಚರಿತ್ರೆಯೇ ಆಧಾರವಾಗಿದೆ. ಇವಲ್ಲದೆ ಹಿಂಡೋಲಾನಾಪದೊ, ಭಕ್ತಿ ಜ್ಞಾನಾನಾಪದೊ ಮತ್ತು ಕೃಷ್ಣಜನ್ಮಸಮೇನಾಪದೊ, ವಸಂತನಾಪದೊ ಎಂಬ ಕೆಲವು ಪ್ರಕೀರ್ಣಕ ಪದಗಳೂ ಸಂಗ್ರಹೀತವಾಗಿವೆ. ಶೃಂಗಾರಮಯ ಪ್ರಕೃತಿ ವರ್ಣನೆ, ವಾತ್ಸಲ್ಯಭಾವ ಹಾಗೂ ಜ್ಞಾನಪ್ರಧಾನ ಭಕ್ತಿಗಳಲ್ಲಿ ಈತನಿಗೆ ವಿಶೇಷ ಆಸಕ್ತಿ. ಈ ಎಲ್ಲ ಕೃತಿಗಳನ್ನೂ ಕಾವ್ಯಸಂಗ್ರಹ ಎಂಬ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ.

	ಈತನ ಶೈಲಿಯ ವೈಭವವನ್ನು ಈತನ ಜ್ಞಾನ. ಭಕ್ತಿ, ವೈರಾಗ್ಯ ವಿಷಯಕ ಪದಗಳಲ್ಲಿ ಕಾಣಬಹುದು. ವೇದಾಂತ ಗೀತೆಗಳಲ್ಲಂತೂ ಈತನ ಜೀವನದ ವಿವಿಧ ಮುಖಗಳು ಚಿತ್ರಿತವಾಗಿವೆ. ದೈವದಲ್ಲಿ ಅನನ್ಯ ಶರಣತ್ವ, ದುಃಖದಲ್ಲಿ ತಗ್ಗದ ದಾಢ್ರ್ಯ, ಭಗವಂತನ ಸದ್ಗುಣಗಳಲ್ಲಿ ಅಚಲವಾದ ನಂಬಿಕೆ. ಸೃಷ್ಟಿ ಸಾಮಾನ್ಯದಲ್ಲಿ ಸೀಮಾತೀತವಾದ ಪ್ರೇಮ- ಇವು ಈತನ ಗೀತೆಗಳ ಪ್ರಧಾನ ಗುಣಗಳು. ಇವೇ ಈತನ ಅನುಯಾಯಿಗಳಿಗೆ ಜೀವಂತ ಪ್ರೇರಣೆಯಾದವು. ಈತನದು ಅನುಭವ ವೇದಾಂತ. ಅಸ್ಪøಶ್ಯರು ಹಾಗೂ ಸ್ತ್ರೀಯರು ಕೂಡ ಭಕ್ತಿಯ ಅಧಿಕಾರಿಗಳೆಂದು ಈತನ ಸಿದ್ಧಾಂತ.

	ಮಹಾತ್ಮ ಗಾಂಧಿಯವರು ಈತನ ಕೃತಿಗಳಿಂದ ತುಂಬಾ ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ. ಬ್ರಾಹ್ಮಣ ಕುಲದಲ್ಲಿ ಜನಿಸಿ ಅಸ್ಪøಶ್ಯರನ್ನು ತನ್ನ ಜನರೆಂದು ಕರೆದುಕೊಂಡು ಅವರನ್ನು ಹರಿಜನ (ದೇವರಿಗೆ ಪ್ರಿಯನಾದ ಮನುಷ್ಯ) ಎಂದು ಕರೆದ ಈ ಕವಿಯನ್ನು ಗಾಂಧೀಜಿ ಬಹುವಾಗಿ ಮೆಚ್ಚಿಕೊಂಡಿದ್ದರು. ಈ ಕವಿಯ ವೈಷ್ಣವ ಜನ ತೊ ತೇನೇ ಕಹಿಯೇ ಜೇ ಪೀಡ್ ಪರಾಯಿ ಜಾಣೆ ರೇ ಎಂಬ ಗೀತೆ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ಪ್ರಾರ್ಥನಾ ಗೀತೆಯಾಗಿತ್ತು.

	ಗುಜರಾತಿ ಸಾಹಿತ್ಯದ ಮೇಲೆ ಈತನ ವ್ಯಕ್ತಿತ್ವ, ದರ್ಶನ, ಹಾಗೂ ಕಾವ್ಯದ ಪ್ರಭಾವ ಅಗಾಧವಾದುದು. ಪ್ರಭಾತಿಯಾ ಛಂದಸ್ಸಿನಲ್ಲಿರುವ ಈತನ ಗೀತೆಗಳು ಪ್ರಭಾತ ಗೀತಗಳಾಗಿ ಈಗಲೂ ಅನೇಕರ ಬಾಯಲ್ಲಿ ನಲಿಯುತ್ತಿವೆ. ಈತ ಭಕ್ತನಾಗಿ, ಸಮಾಜ ಸುಧಾರಕನಾಗಿ, ಕವಿಯಾಗಿ, ಹೊಸಪಂಥದ ಮಾರ್ಗದರ್ಶಕನಾಗಿ, ಭಾರತೀಯ ಸಂಸ್ಕøತಿಯ ಪ್ರತೀಕನಾಗಿ ಗುಜರಾತಿ ಸಾಹಿತ್ಯದಲ್ಲಿ ಬಹು ಉಚ್ಚ ಸ್ಥಾನವನ್ನು ಪಡೆದಿದ್ದಾನೆ.							
		(ಎಸ್.ಜಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ